ವ್ಯಾಟಿಕನ್ ಮಾಧ್ಯಮದ 53ನೇ ಭಾಷೆಯಾಗಿ ಕನ್ನಡ ಸೇರ್ಪಡೆ
ವರದಿ: ವ್ಯಾಟಿಕನ್ ನ್ಯೂಸ್
ಕನ್ನಡ ಭಾಷೆಯು ವ್ಯಾಟಿಕನ್ ರೇಡಿಯೋ-ವ್ಯಾಟಿಕನ್ ನ್ಯೂಸ್ ನ 53ನೇ ಭಾಷೆಯಾಗಿ ಸೇರ್ಪಡೆಗೊಂಡಿದೆ. ಮಂಗಳವಾರದಿಂದ, ಭಾರತದಲ್ಲಿ ಲಕ್ಷಾಂತರ ಜನರು ಮಾತನಾಡುವ ಈ ಭಾಷೆಯಲ್ಲಿ ಇನ್ನು ಮುಂದೆ ವ್ಯಾಟಿಕನ್ ಸುದ್ದಿತಾಣವು ಮೂಡಿ ಬರಲಿದೆ.
ಇದು ವ್ಯಾಟಿಕನ್ನಿನ ಸಂವಹನ ಪೀಠ ಹಾಗೂ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಯೋಗದಲ್ಲಿ ಆರಂಭವಾಗಿರುವ ಉಪಕ್ರಮವಾಗಿದೆ.
“ವ್ಯಾಟಿಕನ್ ಸುದ್ದಿತಾಣದ ಸುದ್ದಿಗಳು ಕನ್ನಡದಲ್ಲಿ ಆರಂಭವಾಗುತ್ತಿರುವುದು ನನಗೆ ಅತೀವ ಸಂತಸ ತಂದಿದೆ” ಎಂದಿರುವ ಬೆಂಗಳೂರಿನ ಮಹಾಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಮಚಾದೊ, “ಕರ್ನಾಟಕದ ಧರ್ಮಸಭೆಗೆ ವಿಶ್ವಗುರುಗಳ, ಧರ್ಮಸಭೆಯ, ಹಾಗೂ ಜಾಗತಿಕ ವಿದ್ಯಾಮಾನಗಳ ಸುದ್ದಿಗಳು ಕನ್ನಡದಲ್ಲಿ ದೊರಕಿರುವುದು ಅದ್ಭುತವಾಗಿದೆ ಮಾತ್ರವಲ್ಲದೆ ಅತಿ ಮುಖ್ಯವೂ ಆಗಿದೆ” ಎಂದರು.
ಮುಂದುವರೆದು ಮಾತನಾಡಿದ ಮಹಾಧರ್ಮಾಧ್ಯಕ್ಷ ಮಚಾದೊ “ಸಿನೋಡಲ್ ಪ್ರಕ್ರಿಯೆಯ ಕುರಿತು ಒತ್ತು ನೀಡುತ್ತಾ, ಧರ್ಮಸಭೆಯನ್ನು ಪ್ರಪಂಚದ ಎಲ್ಲಾ ಗಡಿಗಳಿಗೂ ವಿಸ್ತರಿಸುತ್ತಿರುವ ಪೋಪ್ ಫ್ರಾನ್ಸಿಸರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು. “ಈ ಸುದ್ದಿ ಲೇಖನಗಳನ್ನು ಕನ್ನಡದಲ್ಲಿ ಓದುವುದರಿಂದ ಕರ್ನಾಟಕದ ಓದುಗರಿಗೆ ಬಹಳ ಅನುಕೂಲವಾಗಲಿದೆ ಮಾತ್ರವಲ್ಲದೆ; ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ವ್ಯಾಟಿಕನ್ ರೇಡಿಯೋ ಹಾಗೂ ಇತರೆ ಮಾಧ್ಯಮದ ಮೂಲಕವೂ ಸಹ ಜನರು ಪಡೆದುಕೊಳ್ಳಬಹುದಾಗಿದೆ. ಬೆಂಗಳೂರು ಮಹಾಧರ್ಮಕ್ಷೇತ್ರದ ಮಾಧ್ಯಮ ಸಂವಹನ ಕೇಂದ್ರವು ವಿಶ್ವ ಧರ್ಮಸಭೆಯನ್ನು ನಮ್ಮ ಜನರ ಬಳಿಗೆ ಕರೆ ತರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವ್ಯಾಟಿಕನ್ನಿನ ಸಂವಹನ ಪೀಠದ ಮುಖ್ಯಾಧಿಕಾರಿ (ಪ್ರಿಫೆಕ್ಟ್) ಆಗಿರುವ ಡಾ. ಪೌಲ್ ರುಫಿನಿ ಅವರು ಈ ಕುರಿತು ಪ್ರತಿಕ್ರಿಯಿಸುತ್ತಾ “ವ್ಯಾಟಿಕನ್ ಸುದ್ದಿತಾಣದ ಭಾಷೆಗಳ ಸಮೂಹಕ್ಕೆ ಇದೀಗ ಕನ್ನಡ ಸೇರ್ಪಡೆಗೊಂಡಿದೆ. ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿದ್ದರೂ, ಇಂದಿಗೂ ಅಚಲ ಜೀವಂತಿಕೆಯನ್ನು ಹೊಂದಿದೆ” ಎಂದರು. “ಕಥೋಲಿಕ ಸಮುದಾಯ ಜೀವಂತಿಯೆಯಿಂದ ಇರುವಂತೆಯೇ, 35 ಮಿಲಿಯನ್ ಜನರು ಮಾತನಾಡುವಂತಹ ಭಾಷೆಯೊಂದು ಜೀವಂತಿಕೆಯಿಂದ ಕೂಡಿದೆ. ಇದು ಕನ್ನಡಿಗರ ಸಂಸ್ಕೃತಿಗೆ ಸಂದ ಗೌರವ, ಪ್ರಾಮಾಣಿಕ ಸಂವಹನಕ್ಕೆ ಸಲ್ಲುತ್ತಿರುವ ಸೇವೆಯ ಜೊತೆಗೆ ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಜೊತೆಯಾಗಿ ನಡೆಯುವ ರೀತಿಯಾಗಿದೆ. ನಿಜವಾಗಿಯೂ, ಇದು ಹೆಚ್ಚಿನ ಪರಿಶ್ರಮವನ್ನು ಪ್ರತಿನಿಧಿಸುತ್ತದೆ. ಕನ್ನಡದ ಸುಪ್ರಸಿದ್ಧ ಗಾದೆ ಮಾತು “ಕೈ ಕೆಸರಾದರೆ ಬಾಯಿ ಮೊಸರು” ಎಂಬಂತೆ ಪರಿಶ್ರಮ ಎಂದಿಗೂ ಫಲ ನೀಡುತ್ತದೆ.” ಎಂದೂ ಸಹ ಡಾ. ಪೌಲ್ ರುಫಿನಿ ಅಭಿಪ್ರಾಯ ಪಟ್ಟಿದ್ದಾರೆ.
“ಪೋಪ್ ಫ್ರಾನ್ಸಿಸರ ನುಡಿಯನ್ನು ಲಕ್ಷಾಂತರ ಭಾರತೀಯರ (ಕನ್ನಡಿಗರ) ಮಾತೃಭಾಷೆಯಲ್ಲಿ ನೀಡುವುದು ಕನ್ನಡವನ್ನು ಈಗಾಗಲೇ ವ್ಯಾಟಿಕನ್ ಮಾಧ್ಯಮದಲ್ಲಿರುವ 52 ಭಾಷೆಗಳ ಪಟ್ಟಿಗೆ ಸೇರಿಸಲು ಪ್ರಮುಖ ಕಾರಣವಾಗಿದೆ” ಎನ್ನುವ ವ್ಯಾಟಿಕನ್ ಮಾಧ್ಯಮದ ಸಂಪಾದಕೀಯ ನಿರ್ದೇಶಕಿ ಆ್ಯಂಡ್ರಿಯಾ ತೋರ್ನಿಯೆಲ್ಲಿ “ಇದು ರೋಮ್ ನಗರದ ಧರ್ಮಾಧ್ಯಕ್ಷರಿಗೆ ಹಾಗೂ ವಿಶ್ವ ಧರ್ಮಸಭೆಗೆ ನಾವು ಸೇವೆಯನ್ನು ಮಾಡಲು ಕರೆ ಹೊಂದಿದ್ದೇವೆ ಎಂಬುದನ್ನು ಸೂಚಿಸುತ್ತದೆ” ಎಂದರು. “ಯುದ್ಧ ಸಂಕಷ್ಟಗಳು, ಅನಿಶ್ಚಿತತೆ ಮತ್ತು ಹಿಂಸೆಗಳೇ ಮಡುಗಟ್ಟುತ್ತಿರುವ ಐತಿಹಾಸಿಕ ಕಾಲಘಟ್ಟದಲ್ಲಿ, ಧರ್ಮಸಭೆಯು ಸಂವಹನ, ಸಹಭಾಗಿತ್ವ ಹಾಗೂ ಪರಸ್ಪರ ವಿನಿಮಯಕ್ಕೆ ಒತ್ತುನೀಡುವ ಮೂಲಕ, ರೋಮ್ ಹಾಗೂ ವಿಶ್ವದ ನಡುವೆ ಭಾಂದವ್ಯವನ್ನು ಬೆಸೆಯುತ್ತಿರುವುದು ಉತ್ತಮ ಸಂಗತಿಯಾಗಿದೆ.” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವ್ಯಾಟಿಕನ್ ರೇಡಿಯೋ ಹಾಗೂ ವ್ಯಾಟಿಕನ್ ನ್ಯೂಸ್ ಮುಖ್ಯಸ್ಥರಾದ ಮಾಸ್ಸಿಮಿಲಿಯಾನೊ ಮೆನಿಚೆಟ್ಟಿ ಅವರು ಈ ಕುರಿತು ಮಾತನಾಡುತ್ತಾ “ಧರ್ಮಸಭೆಯ ವಿಸ್ತಾರ ಅದ್ಭುತವಾಗಿದೆ. 93 ವರ್ಷಗಳ ಹಿಂದೆ, ವಿಶ್ವಗುರು ಹನ್ನೊಂದನೇ ಭಕ್ತಿನಾಥರು ಗುಗ್ಲಿಯೆಲ್ಮೊ ಮಾರ್ಕೋನಿಗೆ, ವಿಶ್ವಕ್ಕೆ ಭರವಸೆಯನ್ನು ತರಲು, ಕ್ರೈಸ್ತ ಘೋಷಣೆಯನ್ನು ಪಸರಿಸಿ, ಕ್ರಿಸ್ತರ ಧರ್ಮಸಭೆಯನ್ನು ನಿರ್ಮಿಸುವ ಸಲುವಾಗಿ ವ್ಯಾಟಿಕನ್ ರೇಡಿಯೋ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ನೀಡಿದರು.” ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, “1990 ರ ದಶಕದಲ್ಲಿ ವಿಶ್ವಗುರುಗಳ ರೇಡಿಯೋ ತರಂಗಗಳು ವಿಯೇಟ್ನಾಂವರೆಗೂ ಹಬ್ಬಿ, “ರೇಡಿಯೋ ಕ್ರೈಸ್ತರು” ಎಂಬ ಹೊಸ ಪರಿಕಲ್ಪನೆಗೆ ನಾಂದಿ ಹಾಡಿತು. ಇಂದು ಆಧುನಿಕ ತಂತ್ರಜ್ಞಾನ (ಹೃಸ್ವ ತರಂಗ, ಉಪಗ್ರಹ ಹಾಗೂ ಇಂಟರ್ನೆಟ್) ಪ್ರಭುವಿನ ಶುಭಸಂದೇಶವನ್ನು ಜಗತ್ತಿಗೆ ಸಾರಲು ನಮಗೆ ಅನೇಕ ಅವಕಾಶಗಳನ್ನು ನೀಡಿದೆ. ಕನ್ನಡ ಭಾಷೆಯು ಉಲ್ಲಾಸ ಹಾಗೂ ಭ್ರಾತೃತ್ವದ ಮಾದರಿಯಾಗಿದ್ದು, ಜವಾಬ್ದಾರಿಯುತವಾಗಿ, ಒಗ್ಗಟ್ಟಿನಿಂದ ಈ ಹಾದಿಯನ್ನು ಕ್ರಮಿಸಬೇಕಿರುವುದು ನಮ್ಮ ಉದ್ದೇಶ ಹಾಗೂ ಆಶಯವಾಗಿದೆ” ಎನ್ನುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.