ಹುಡುಕಿ

ಏಕತೆಯು ಕೊಲ್ಲುತ್ತದೆ: ಕನೋಷಿಯನ್ ಗುರುಗಳು, ಮೌಂಟ್'ಫೋರ್ಟ್ ಸಹೋದರರಿಗೆ ಪೋಪ್ ಕಿವಿಮಾತು

ಸೇಂಟ್ ಗ್ಯಾಬ್ರಿಯಲ್ ಎಂಬಲ್ಲಿ ಕನೋಷಿಯನ್ ಗುರುಗಳು ಹಾಗೂ ಮೌಂಟ್ ಫೋರ್ಟ್ ಸಹೋದರರನ್ನು ಭೇಟಿ ಮಾಡುತ್ತಾ ಮಾತನಾಡಿದ ಪೋಪ್ ಫ್ರಾನ್ಸಿಸ್, ಶಿಲುಬೆಯ ಮೇಲೆ ತಮ್ಮ ನೋಟವನ್ನು ನೆಡುತ್ತಾ, ವೈವಿಧ್ಯತೆಯ ಶ್ರೀಮಂತಿಕೆಗೆ ಮೌಲ್ಯವನ್ನು ನೀಡಿ, ಧೈರ್ಯದಿಂದ ಬಡವರನ್ನು ತಮ್ಮ ಕರಗಳಲ್ಲಿ ಅಪ್ಪಿಕೊಳ್ಳಬೇಕು ಎಂದು ಕರೆ ನೀಡುತ್ತಾರೆ.

ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್

ತಮ್ಮ ಸಾಮಾನ್ಯ ಸಭೆಗೆ ನೆರೆದಿದ್ದ ಕನೋಷಿಯನ್ ಧಾರ್ಮಿಕ ಸಭೆಯ ಗುರುಗಳು ಹಾಗೂ ಮೌಂಟ್ ಫೋರ್ಟ್ ಧಾರ್ಮಿಕ ಸಭೆಯ ಸಹೋದರರನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಸೋಮವಾರ ಮಾತನಾಡಿದರು.

ಈ ಎರಡು ಧಾರ್ಮಿಕ ಸಭೆಗಳು ತಮ್ಮ ಸ್ಥಾಪಕರಾದ ಸಂತ ಕನೋಸ್ಸಾದ ಮಗ್ದಲೇನ ಹಾಗೂ ಫ್ರೆಂಚ್ ದೇಶದ ಸಂತ ಲೂಯಿಸ್ ಮರಿಯ ದೆ ಮೌಂಟ್'ಫೋರ್ಟ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ಧಾರ್ಮಿಕ ಸಭೆಗಳ ಸಾಮಾನ್ಯ ಸಭೆಯನ್ನು ಹಮ್ಮಿಕೊಂಡಿದ್ದಾರೆ.

ಇವರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್, ಧಾರ್ಮಿಕ ಸಭೆಗಳ ವಾರ್ಷಿಕ ಸಾಮಾನ್ಯ ಸಭೆ ಎಂಬುದು ಅನುಗ್ರಹದ ಹಾಗೂ ವರದಾನದ ಸಮಯವಾಗಿದೆ. ಹಳೆಯದನ್ನು ಧನ್ಯತೆಯಿಂದ ನೆನೆಸಿಕೊಂಡು, ವಾಸ್ತವಕ್ಕೆ ಗಮನವನ್ನು ಹರಿಸಿ, ಕಾಲದ ಸಂಕೇತಗಳನ್ನು ಓದುತ್ತಾ ಭವಿಷ್ಯದೆಡೆಗೆ ನೋಡುವ ಈ ಪ್ರಮುಖ ಸಮಯವು ಪವಿತ್ರಾತ್ಮರ ಪ್ರೇರೇಪಣೆಯಿಂದ ಕ್ರಿಯಾಶೀಲವಾಗಿ ಎದುರು ನೋಡುವಂತದ್ದಾಗಿದೆ ಎಂದು ಹೇಳಿದರು.

ಈ ಸಭೆಗಳಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯ ಕಾಲಗಳು ಎದುರಾಗಲಿದ್ದು, ಎಲ್ಲವನ್ನು ವಿಮರ್ಶೆಗೆ ಒಳಪಡಿಸುವ ಹಾಗೂ ಮೌಲ್ಯಮಾಪನಗೊಳಿಸುವ ಪ್ರಕ್ರಿಯೆಯು ಇದಾಗಿದೆ. ಹೀಗೆ ಇದನ್ನು ವಿಮರ್ಶಿಸುವ ಮೂಲಕ ಧಾರ್ಮಿಕ ಸಭೆಯ ಅಭಿವೃದ್ಧಿಯ ಮುನ್ನೋಟವನ್ನು ಕಾಣಲು ಸಾಧ್ಯ ಎಂದು ಅವರು ಹೇಳಿದರು.

"ಜ್ವಲಿಸದ ಯಾವನೂ ಸಹ ಕಿಡಿಯನ್ನು ಹೊತ್ತಿಸುವುದಿಲ್ಲ" ಎಂಬ ಕನೋಷಿಯನ್ ಗುರುಗಳ ಶೀರ್ಷಿಕೆಯ ಕುರಿತು ಮಾತನಾಡುತ್ತಾ, ಬಡವರ ಸೇವೆ ಹಾಗೂ ಅವರಿಗೆ ಶಿಕ್ಷಣ ಮತ್ತು ದಾನ ಕ್ರಿಯೆಗಳನ್ನು ಮುಂದುವರಿಸುವಂತೆ ಪೋಪ್ ಫ್ರಾನ್ಸಿಸ್ ಕನೋಷಿಯನ್ ಗುರುಗಳಿಗೆ ಹೇಳಿದರು. ಧಾರ್ಮಿಕ ಗುರುಗಳು ಹಾಗೂ ಸಹೋದರ ಸಹೋದರಿಯರು ಕ್ರಿಸ್ತನ ಪ್ರೀತಿಯಿಂದ ಪ್ರೇರೇಪಿತರಾಗಿ ಆತನ ಶುಭ ಸಂದೇಶದ ಕಿಡಿಯನ್ನು ಹೊತ್ತಿಸುವವರಾಗುವ ಬದಲಿಗೆ ಆ ಕಿಡಿಯನ್ನು ನಂದಿಸುವ ಅಗ್ನಿಶಾಮಕ ವ್ಯಕ್ತಿಗಳಂತೆ ವರ್ತಿಸುತ್ತಿರುವುದು ನನಗೆ ಅತೀವ ಬೇಸರ ತರುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ನಮ್ಮ ಈ ಸೇವಾ ಕಾರ್ಯದಲ್ಲಿ ಸವಾಲುಗಳು, ಸಂಕಷ್ಟಗಳು ಸಹಜ. ಇವೆಲ್ಲವನ್ನು ಮೆಟ್ಟಿ ನಿಲ್ಲಬೇಕಾದರೆ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಶಿಲುಬೆಯ ಮೇಲೆ ನಮ್ಮ ನೋಟವನ್ನು ನೆಟ್ಟು, ನಮ್ಮ ಸ್ಥಾಪಕ ಸಂತರುಗಳು ಮಾಡಿದಂತೆ, ಯೇಸುವನ್ನು ದಿಟ್ಟಿಸುತ್ತಾ ಬಡವರ ಗಾಯಗಳಿಗೆ ಚಿಕಿತ್ಸೆಯನ್ನು ನೀಡಬೇಕಿದೆ ಎಂದು ಹೇಳಿದರು.

ಮೌಂಟ್ ಫೋರ್ಟ್ ಸಹೋದರರ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್, ದೀನತೆ ಹಾಗೂ ವಿಶ್ವಾಸ ಎಂಬುದು ಸಂತ ಲೂಯಿಸ್ ಮರಿಯ ದೆ ಮೌಂಟ್'ಫೋರ್ಟ್ ಅವರ ಚಿಹ್ನೆಯಾಗಿತ್ತು. ಸಂತ ಮೌಂಟ್ ಫೋರ್ಟ್ ತಮ್ಮೆಲ್ಲವನ್ನು ತ್ಯಜಿಸಿ, ದೇವರು, ಶಿಲುಬೆ ಹಾಗೂ ಮಾತೆ ಮರಿಯಮ್ಮನವರಿಗಾಗಿ ಮಾತ್ರ ಸೇವೆ ಸಲ್ಲಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಹೇಳಿದರು.

ಕೊನೆಗೆ ವೈವಿಧ್ಯತೆಯ ಪ್ರಾಮುಖ್ಯತೆಯ ಕುರಿತು ವಿವರಿಸಿದ ಅವರು, ಯಾವುದೇ ಧಾರ್ಮಿಕ ಸಂಸ್ಥೆಯಲ್ಲಿ ಅಥವಾ ಧರ್ಮಕ್ಷೇತ್ರದಲ್ಲಿ ಅಥವಾ ಶ್ರೀಸಾಮಾನ್ಯ ಗುಂಪುಗಳಲ್ಲಿ ಏಕತೆ ಎಂಬುದು ಜಡತ್ವದ ಸಂಕೇತವಾಗಿದ್ದು, ಅದು ಕೊಲ್ಲುತ್ತದೆ ಎಂದು ಹೇಳಿದರು. ಇದಕ್ಕೆ ತದ್ವಿರುದ್ಧವಾಗಿ ಶಾಂತಿಯುತ ವೈವಿಧ್ಯತೆ ಎಂಬುದು ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಸಹಾಯಕಾರಿಯಾಗುತ್ತದೆ ಎಂದು ನುಡಿದರು.

ಧಾರ್ಮಿಕ ಸಭೆಗಳ ಸಾಮಾನ್ಯ ಸಭೆಗಳು ಕೌಟುಂಬಿಕ ಕಾರ್ಯಕ್ರಮವಾಗಿದೆ; ಅದೇ ರೀತಿಯಲ್ಲಿ ಅವು ಧರ್ಮಸಭೆಯ ಕಾರ್ಯಕ್ರಮವು ಹೌದು, ನಮ್ಮ ಉದ್ದಾರದ ಕಾರ್ಯಕ್ರಮವು ಹೌದು ಎಂದು ಹೇಳುತ್ತಾ ತಮ್ಮ ಮಾತನ್ನು ಮುಗಿಸಿದರು.

29 April 2024, 13:44