ಹುಡುಕಿ

ಪೂರ್ವ ದೇಶಗಳ ಸುದ್ದಿಗಳು - ಮೇ 3

ಈ ವಾರದ ಪೂರ್ವ ಧರ್ಮಸಭೆಯ ಸುದ್ದಿಗಳಲ್ಲಿ ಜೂಲಿಯನ್ ಕ್ಯಾಲೆಂಡರ್ ಅನ್ನು ಪಾಲಿಸುವ ಕ್ರೈಸ್ತರಿಂದ ಗರಿಗಳ ಭಾನುವಾರದ ಆಚರಣೆ, ಕಾರ್ಡಿನಲ್ ಲೂಯಿಸ್ ಸಾಕೋ ಅವರ ಯಾಜಕಧೀಕ್ಷೆಯ ಜೂಬಿಲಿ ಆಚರಣೆ, ಹಾಗೂ ಬೈರೂತಿನಲ್ಲಿರುವ ಸಂತ ಜೋಸೆಫರ ವಿಶ್ವವಿದ್ಯಾನಿಲಯದ 150ನೇ ವಾರ್ಷಿಕೋತ್ಸವದ ಆಚರಣೆ.

ಗರಿಗಳ ಭಾನುವಾರದ ಆಚರಣೆ

ಭಾನುವಾರ ಏಪ್ರಿಲ್ 29ರಂದು ಜೂಲಿಯನ್ ಕ್ಯಾಲೆಂಡರನ್ನು ಪಾಲಿಸುವ ಕ್ರೈಸ್ತರು ಗರಿಗಳ ಭಾನುವಾರವನ್ನು ಆಚರಿಸಿದರು. ಪ್ಯಾಲೆಸ್ತೀನ್, ಈಜಿಪ್ಟ್, ಲೆಬನಾನ್, ಜೋರ್ಡಾನ್, ಹಾಗೂ ಸಿರಿಯಾ ದೇಶಗಳಲ್ಲಿ ಕ್ರೈಸ್ತರು ಗರಿಗಳ ಭಾನುವಾರವನ್ನು ಆಚರಿಸಿದ್ದು, ಅಂದು ಅನೇಕ ರೀತಿಯ ಮೆರವಣಿಗೆಗಳನ್ನು ಹಮ್ಮಿಕೊಂಡು ಯೇಸುಕ್ರಿಸ್ತರು ಜರುಸಲೇಮಿಗೆ ಪ್ರವೇಶ ಮಾಡಿದ ಘಟನೆಯನ್ನು ನೆನೆದು ಜಯಘೋಷಗಳಿಂದ ಆಚರಿಸಿದರು.

ಪೂರ್ವ ಧರ್ಮಸಭೆಯ ಆಚರಣೆಗಳಲ್ಲಿ ಗರಿಗನ್ನ ಭಾನುವಾರದ ಆಚರಣೆ ವಿಭಿನ್ನವಾಗಿದ್ದು ಅಂದು ಎಲ್ಲರೂ ವಿವಿಧ ಬಣ್ಣಗಳ ಬಟ್ಟೆಗಳನ್ನು ಧರಿಸಿ ಇದನ್ನು ಆಚರಿಸುತ್ತಾರೆ. ಯೇಸುವಿನ ಪಾಡುಗಳಿಗೂ ಮುಂಚಿತವಾಗಿ ಇದೇ ಅವರ ಕೊನೆಯ ಸಂತೋಷದಾಯಕ ಆಚರಣೆಯಾಗಿರುತ್ತದೆ.

ಕಾರ್ಡಿನಲ್ ಲೂಯಿಸ್ ಸಾಕೋ ಅವರ ಜ್ಯೂಬಿಲಿ ಆಚರಣೆ

ಸೋಮವಾರ ಮೇ 1ನೇ ತಾರೀಕು ಇರಾಕ್ ಕಥೋಲಿಕ ಧರ್ಮಸಭೆಯ ಚಾಲ್ಡಿಯನ್ ಕಥೋಲಿಕ ಸಂಪ್ರದಾಯದ ಪಿತೃ ಪ್ರಧಾನರಾಗಿರುವ ಕಾರ್ಟಿನಲ್ ಲೂಯಿಸ್ ಸಾಕೋ ಅವರು ತಮ್ಮ ಯಾಜಕದೀಕ್ಷೆಯ ಜ್ಯೂಬಿಲಿಯನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಎರ್ಬಿಲ್ ಸೆಮಿನರಿಯಲ್ಲಿ ಬಲಿಪೂಜೆಯನ್ನು ಅರ್ಪಿಸಿದರು. ಅವರು ಬಾಗ್ದಾಧ್ ನಗರವನ್ನು ತೊರೆದ ನಂತರ ಇಲ್ಲಿ ಜೀವಿಸುತ್ತಿದ್ದಾರೆ.

ಬೈರೂತಿನ ಸಂತ ಜೋಸೆಫರ ವಿಶ್ವವಿದ್ಯಾನಿಲಯದ ವಾರ್ಷಿಕೋತ್ಸವ

ಬೈರೂತಿನ ಸಂತ ಜೋಸೆಫರ ವಿಶ್ವವಿದ್ಯಾನಿಲಯವು ತನ್ನ ಸ್ಥಾಪನೆಯ 150 ವರ್ಷಗಳನ್ನು ಪೂರೈಸಿ, ತನ್ನ ಜ್ಯೂಬಿಲಿಯನ್ನು ಆಚರಿಸಿಕೊಳ್ಳುತ್ತಿದೆ. ಜೆಸುಯಿಟ್ ಸಭೆಯ ಗುರುಗಳು ತಮ್ಮ ಸಭೆಯ ಗುರು ವಿದ್ಯಾರ್ಥಿಗಳ ವ್ಯಾಸಾಂಗಕ್ಕಾಗಿ ಎಂದು ಸ್ಥಾಪಿಸಿದ್ದ ಪುಟ್ಟ ಕಾಲೇಜು ಕ್ರಮೇಣ ವಿಶ್ವವಿದ್ಯಾನಿಲಯವಾಗಿ ದೇಶದ ಅರ್ಧದಷ್ಟು ವಿವಿಧ ರಂಗಗಳ ನಾಯಕರುಗಳಿಗೆ ವಿದ್ಯಾಬ್ಯಾಸವನ್ನು ನೀಡಿದೆ. ಸ್ಥಳೀಯ ಸಮಾಜದ ಎಲ್ಲರಿಗೂ ಯಾವುದೇ ಪೂರ್ವಾಗ್ರಹವಿಲ್ಲದೆ ಶಿಕ್ಷಣವನ್ನು ನೀಡುವ ಮೂಲಕ ಸಾರ್ಥಕತೆಯನ್ನು ಮೆರೆದಿದೆ.     

03 May 2024, 17:38