ಹುಡುಕಿ

ಮಹಾಧರ್ಮಾಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಗರ್ ಮಹಾಧರ್ಮಾಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಗರ್   (DRB)

ವಿಯೆಟ್ನಾಂ ದೇಶಕ್ಕೆ ಆರು ದಿನಗಳ ಭೇಟಿ ಕೈಗೊಂಡ ಮಹಾಧರ್ಮಾಧ್ಯಕ್ಷ ಗ್ಯಾಲಗರ್

ವ್ಯಾಟಿಕನ್ನಿನ ವಿದೇಶಿ (ರಾಜತಾಂತ್ರಿಕ) ಸಂಬಂಧಗಳ ರಾಜ್ಯ ಕಾರ್ಯದರ್ಶಿಯಾಗಿರುವ ಮಹಾಧರ್ಮಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಗರ್ ಅವರು ಆರು ದಿನಗಳ ಕಾಲ ವಿಯೇಟ್ನಾಂ ದೇಶಕ್ಕೆ ರಾಜತಾಂತ್ರಿಕ ಭೇಟಿಯನ್ನು ಕೈಗೊಂಡಿದ್ದಾರೆ. ಈ ಭೇಟಿಯಲ್ಲಿ ಅವರು ಅಲ್ಲಿನ ಪ್ರಧಾನ ಮಂತ್ರಿ, ವಿದೇಶಾಂಗ ಮಂತ್ರಿ ಹಾಗೂ ಸ್ಥಳೀಯ ಧರ್ಮಸಭೆಯ ಗುರುಗಳು ಹಾಗೂ ಭಕ್ತಾಧಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಏಪ್ರಿಲ್ 09 ರಂದು ವ್ಯಾಟಿಕನ್ನಿನ ರಾಜತಾಂತ್ರಿಕ ಸಂಬಂಧಗಳು ಹಾಗೂ ಅಂತರ್'ರಾಷ್ಟ್ರೀಯ ಸಂಸ್ಥೆಗಳ ಕಾರ್ಯದರ್ಶಿಯಾದ ಮಹಾಧರ್ಮಾಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಗರ್ ಅವರು ವಿಯೇಟ್ನಾಂ ಭೇಟಿಯನ್ನು ಕೈಗೊಂಡಿದ್ದಾರೆ. ಅಲ್ಲಿ ಅವರು ಭಾನುವಾರ, ಏಪ್ರಿಲ್ 14 ರವರೆಗೆ ಇರಲಿದ್ದಾರೆ.

ಬ್ರಿಟಿಷ್-ಮೂಲದ ಮಹಾಧರ್ಮಾಧ್ಯಕ್ಷ ಗ್ಯಾಲಗರ್ ಅವರು ತಮ್ಮ ಪ್ರಯಾಣವನ್ನು ಕೈಗೊಂಡ ಬೆನ್ನಲ್ಲೇ ರಾಜ್ಯ ಸಚಿವಾಲಯದ "ಎಕ್ಸ್" ಸಾಮಾಜಿಕ ಜಾಲತಾಣ ಖಾತೆಯಲ್ಲಿ ಆರು ದಿನಗಳ ಕಾಲ ಅವರ ಪ್ರವಾಸ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪ್ರವಾಸ ಪಟ್ಟಿಯಲ್ಲಿನ ವೇಳಾಪಟ್ಟಿಯ ಪ್ರಕಾರ ಅವರು ವಿಯೇಟ್ನಾಂ ಪ್ರಧಾನಮಂತ್ರಿ ಫಾಮ್ ಮಿನ್ ಚಿನ್ ಹಾಗೂ ವಿದೇಶಾಂಗ ಸಚಿವ ಬುಯ್ ಥಾನ್ ಸನ್ ಅವರನ್ನು ಭೇಟಿ ಮಾಡಲಿದ್ದಾರೆ.

ತಮ್ಮ ಭೇಟಿಯ ವೇಳೆ ಇವರು ಅಲ್ಲಿನ ಸರ್ಕಾರದ ಆಂತರಿಕ ಸಚಿವಾಲಯದೊಂದಿದೆ ಸಭೆಗಳನ್ನು ನಡೆಸಲಿದ್ದಾರೆ ಹಾಗೂ ನಂತರ ಅಲ್ಲಿನ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಮಹಾಧರ್ಮಾಧ್ಯಕ್ಷ ಗ್ಯಾಲಗರ್ ಅವರು ಹೂ ಪ್ರಾಂತ್ಯದ ಮೇಜರ್ ಸೆಮಿನರಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಲಿದ್ದು, ಅಲ್ಲಿನ "ಫೂ ಕಾಮ್" ಪ್ರಧಾನಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. 

ಪ್ರಯಾಣದ ಘೋಷಣೆ     

ಜನವರಿ ತಿಂಗಳಲ್ಲೇ ತಾವು ಈ ವರ್ಷ ವಿಯೇಟ್ನಾಂ ದೇಶಕ್ಕೆ ಪ್ರಯಾಣವನ್ನು ಕೈಗೊಳ್ಳುವುದಾಗಿ ಮಹಾಧರ್ಮಾಧ್ಯಕ್ಷ ಗ್ಯಾಲಗರ್ ಅವರು ಹೇಳಿದ್ದರು. ಇದಕ್ಕೂ ಮುಂಚಿತವಾಗಿ ವಿಯೇಟ್ನಾಂ ದೇಶದ ಕಮ್ಯೂನಿಸ್ಟ್ ಪಕ್ಷದ ನಾಯಕರು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ಭೇಟಿ ಮಾಡಿದ್ದರು. 

ಡಿಸೆಂಬರ್ ತಿಂಗಳಲ್ಲಿ ವಿಯೇಟ್ನಾಂ ಮತ್ತು ವ್ಯಾಟಿಕನ್ ರಾಜ್ಯವು ವಿಯೇಟ್ನಾಂ ದೇಶದಲ್ಲಿ ಪೋಪರ ಪ್ರತಿನಿಧಿ ಕಚೇರಿಯನ್ನು ತೆರಯುವ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರಂತೆ, ವಿಯೇಟ್ನಾಂ ದೇಶಕ್ಕೆ ಪ್ರೇಷಿತ ರಾಯಭಾರಿಯನ್ನು ನೇಮಿಸಲಾಗಿತ್ತು. 

ಮಹಾಧರ್ಮಾಧ್ಯಕ್ಷ ಗ್ಯಾಲಗರ್ ಅವರು ಈ ವರ್ಷ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ವಿಯೇಟ್ನಾಂ ದೇಶಕ್ಕೆ ಭೇಟಿ ನೀಡಲಿದ್ದಾರೆ ಎಂಬ ಕುರಿತು ಸುಳಿವು ನೀಡಿದರು ಹಾಗೂ ಮುಂದೊಂದು ದಿನ ಪೋಪ್ ಫ್ರಾನ್ಸಿಸ್ ಅವರೂ ಸಹ ಭೇಟಿ ಮಾಡಬಹುದು ಎಂದೂ ಸಹ ಅಭಿಪ್ರಾಯಪಟ್ಟರು.

ವಿಯೆಟ್ನಾಂ ಧರ್ಮಸಭೆಗೆ ಪೋಪ್ ಫ್ರಾನ್ಸಿಸ್ ಅವರ ಪತ್ರ

"ಒಳ್ಳೆಯ ಕ್ರೈಸ್ತರಾಗಿ ಹಾಗೂ ಒಳ್ಳೆಯ ನಾಗರೀಕರಾಗಿ ಜೀವಿಸುವಂತೆ ವಿಯೇಟ್ನಾಂ ದೇಶದ ಕ್ರೈಸ್ತರಿಗೆ ಪೋಪ್ ಫ್ರಾನ್ಸಿಸ್ 2023 ರಲ್ಲಿ ಪತ್ರವನ್ನು ಬರೆದಿದ್ದರು. ಧರ್ಮ, ಸಂಸ್ಕೃತಿ ಹಾಗೂ ಜನಾಂಗ ಎಂಬ ಭಿನ್ನತೆಯ ಹೊರತಾಗಿ ದೇವರ ಪ್ರೀತಿಯ ಸಾಕ್ಷಿಗಳಾಗಲು ಆ ಪತ್ರದ ಮೂಲಕ ಪೋಪ್ ಫ್ರಾನ್ಸಿಸ್ ವಿಯೇಟ್ನಾಂ ಜನತೆಗೆ ಕರೆ ನಿಡಿದ್ದರು. 

"ಇದು ಕಥೋಲಿಕರ ಗುರುತನ್ನು ಒಳ್ಳೆಯ ಕ್ರೈಸ್ತರೆಂದು ಸಾರುತ್ತದೆ ಮಾತ್ರವಲ್ಲದೆ ಒಳ್ಳೆಯ ನಾಗರೀಕರೆಂದು ಹಾಗೂ ಆ ಮೂಲಕ ಪ್ರಭುವಿನ ಶುಭಸಂದೇಶವನ್ನು ಸಾರುವವರೆಂದು ಗುರುತಿಸುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. 

"ಎಲ್ಲೆಲ್ಲಿ ಧಾರ್ಮಿಕ ಸ್ವಾಂತಂತ್ರ್ಯವಿದೆಯೋ ಅಲ್ಲಲ್ಲಿ ಕಥೋಲಿಕರು ವಿಯೇಟ್ನಾಂ ದೇಶಕ್ಕಾಗಿ ಸಂವಾದ ಹಾಗೂ ಭರವಸೆಯನ್ನು ಉತ್ತೇಜಿಸಬಹುದು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

09 April 2024, 12:54