ಹುಡುಕಿ

ಪಾಪನಿವೇದನೆ ಹಿಂಸೆಯಾಗಬಾರದು, ಎಲ್ಲವನ್ನೂ ಕ್ಷಮಿಸಿ: ವೆರೋನಾದ ಗುರುಗಳಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತು

ವಿಶ್ವಗುರು ಫ್ರಾನ್ಸಿಸ್ ಇಟಲಿಯ ವೆರೋನಾ ನಗರಕ್ಕೆ ಅಲ್ಲಿನ ಗುರುಗಳು, ಸೇವಾದರ್ಶಿಗಳು, ಹಾಗೂ ಧಾರ್ಮಿಕ ಸಹೋದರ ಸಹೋದರಿಯರೊಂದಿಗೆ ಭೇಟಿ ನೀಡುವ ಮೂಲಕ ತಮ್ಮ ಭೇಟಿಯನ್ನು ಆರಂಭಿಸಿದ್ದಾರೆ. ನಗರದ ವಿಶ್ವಾಸ ದಾನ ಹಾಗೂ ಭರವಸೆಯ ಪರಂಪರೆಯನ್ನು ಆಚರಿಸುವ ಮೂಲಕ, ಪ್ರತಿಯೊಬ್ಬರು ತಮ್ಮ ದೈವ ಕರೆಯನ್ನು ಧೈರ್ಯದಿಂದ ಅಪ್ಪಿಕೊಂಡು, ತಮ್ಮ ಸೇವ ಕಾರ್ಯವನ್ನು ಮುಂದುವರಿಸಬೇಕೆಂದು ಕಿವಿ ಮಾತನ್ನು ಹೇಳಿದ್ದಾರೆ.

ವರದಿ: ಫ್ರಾಂಚೆಸ್ಕ ಮೆರ್ಲೋ, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಶನಿವಾರ ಇಟಲಿಯ ವೆರೋನ ನಗರಕ್ಕೆ ತಮ್ಮ ಒಂದು ದಿನದ ಪಾಲನಾ ಭೇಟಿಯನ್ನು ಕೈಗೊಂಡಿದ್ದಾರೆ. ತಮ್ಮ ಭೇಟಿಯಲ್ಲಿ ಮೊದಲಿಗೆ ಅಲ್ಲಿನ ಗುರುಗಳು ಸೇವಾದರ್ಶಿಗಳು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ಭೇಟಿ ಮಾಡಿದ್ದಾರೆ.

ಇಟಲಿಯ ಅತ್ಯಂತ ಸುಂದರವಾದ ರೋಮಾನೆಸ್ಕ್ ಶೈಲಿಯ ಪ್ರಧಾನ ಚರ್ಚುಗಳಲ್ಲಿ ಒಂದಾದ ಸಂತ ಝೇನೋ ಪ್ರಧಾನಾಲಯದಲ್ಲಿ ಎಲ್ಲರೂ ಒಂದಾಗಿ ಸೇರಿರುವ ಈ ಸಂದರ್ಭದಲ್ಲಿ, ಈ ಭವ್ಯ ದೇವಾಲಯವು ನನಗೆ ಒಂದು ಸುಂದರ ಹಡಗಿನಂತೆ ಬಾಸವಾಗುತ್ತಿದೆ. ಇದರ ಅರ್ಥ ಹಾಗೂ ಸಂಕೇತ ನಾವೆಲ್ಲರೂ ಪ್ರಭುವಿನ ಹಡಗಿನಲ್ಲಿದ್ದೇವೆ ಎಂಬುದಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ನುಡಿದರು.

ದೈವ ಕರೆಯನ್ನು ಸ್ವಾಗತಿಸುವುದು

"ಎಲ್ಲಕ್ಕಿಂತ ಮೊದಲಿಗೆ ದೈವ ಕರೆಯನ್ನು ನಾವು ಸ್ವಾಗತಿಸಬೇಕು" ಎಂದು ವಿಶ್ವಗುರು ಫ್ರಾನ್ಸಿಸ್ ನುಡಿದರು.

ಯೇಸುಕ್ರಿಸ್ತರು ಗಲಿಲೆಯದಲ್ಲಿ ತಮ್ಮ ಮೊದಲ ಶಿಷ್ಯರನ್ನು ಆರಿಸಿಕೊಳ್ಳುವ ಸಂದರ್ಭವನ್ನು ನೆನಪಿಸಿದ ವಿಶ್ವಗುರು ಫ್ರಾನ್ಸಿಸ್, ಈ ಘಟನೆಯನ್ನು ನಾವು ಎಂದಿಗೂ ಮರೆಯಬಾರದು. ಪ್ರಭು ಎಲ್ಲರನ್ನೂ ತಮ್ಮ ಪರಿಸ್ಥಿತಿಗಳು ಹಾಗೂ ಜೀವನದ ವಿರುದ್ಧ ಶೈಲಿಗಳ ಹೊರತಾಗಿಯೂ ಆರಿಸಿಕೊಳ್ಳುತ್ತಾರೆ ಎಂದು ಹೇಳಿದರು. "ಯಾಜಕ ಬದುಕಿನ ಮೂಲತೆ ಪ್ರಭುವಿನ ದೈವ ಕರೆಯಾಗಿದೆ" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

ಸೇವಾಕಾರ್ಯ

ತಮ್ಮ ಚಿಂತನೆಯ ಎರಡನೇ ಅಂಶವನ್ನು ಕುರಿತು ಪ್ರಸ್ತಾಪಿಸಿದ ವಿಶ್ವಗುರು ಫ್ರಾನ್ಸಿಸ್ ಸೇವಾ ಕಾರ್ಯದ ಕುರಿತು ಪ್ರಬೋಧನೆಯನ್ನು ಮುಂದುವರಿಸಿದರು. ನಮ್ಮ ಸೇವ ಕಾರ್ಯದಲ್ಲಿ ಧೈರ್ಯವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಹೇಳುವ ಅವರು, ಯೇಸು ಗಲಿಲೆಯ ಸರೋವರದಲ್ಲಿ ತಮ್ಮ ಶಿಷ್ಯರೊಂದಿಗೆ ಮುಖಾಮುಖಿಯಾಗುವ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಂಡರು.

"ಧರ್ಮಸಭೆಗೆ ತಿಳಿದಿರುವ ವರದಾನವೆಂದರೆ ಅದು ಧೈರ್ಯ" ಎಂದು ಹೇಳುವ ವಿಶ್ವಗುರು ಫ್ರಾನ್ಸಿಸ್, ವೇರೋನಾ ನಗರದ ಗುರುಗಳ ಹಾಗೂ ಧಾರ್ಮಿಕ ಸಹೋದರ ಸಹೋದರಿಯರ ಗುಣಲಕ್ಷಣವೇನೆಂದರೆ ಅದು ಧೈರ್ಯದಿಂದ ಶುಭ ಸಂದೇಶ ಪ್ರಸಾರ ಕಾರ್ಯಗಳನ್ನು ಕೈಗೊಳ್ಳುವುದಾಗಿದೆ ಎಂದು ಹೇಳಿದರು.

ಪಾಪ ನಿವೇದನೆಯ ಸಂದರ್ಭದಲ್ಲಿ ಗುರುಗಳು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್, ಎಲ್ಲರನ್ನು ಎಲ್ಲವನ್ನು ಕ್ಷಮಿಸಬೇಕೆಂದು ಕಿವಿ ಮಾತನ್ನು ಹೇಳುತ್ತಾರೆ. ಒಂದು ವೇಳೆ ನಿಮಗೆ ಅರ್ಥವಾಗದಿದ್ದರೆ, ಕ್ಷಮಿಸಿರಿ. ಅದು ಪ್ರಭುವಿಗೆ ಅರ್ಥವಾಗುತ್ತದೆ. ದಯವಿಟ್ಟು ಪಾಪ ನಿವೇದನೆಯನ್ನು ಹಿಂಸೆಯನ್ನಾಗಿಸಬೇಡಿ ಎಂದು ಹೇಳಿದ್ದಾರೆ.

18 May 2024, 16:46