ಹುಡುಕಿ

Pope Francis meets grandparents and grandchildren at the Vatican Pope Francis meets grandparents and grandchildren at the Vatican 

ಪೋಪ್: ಹಿರಿಯರು ಭವಿಷ್ಯದ ಗಟ್ಟಿ ತಳಪಾಯವಾಗಿದ್ದಾರೆ

ಜುಲೈ ೨೮, ೨೦೨೪ ರಂದು ನಡೆಯಲಿರುವ ವಿಶ್ವ ಅಜ್ಜ-ಅಜ್ಜಿಯರ ಹಾಗೂ ಹಿರಿಯರ ದಿನಾಚರಣೆಯ ಅಂಗವಾಗಿ ಸಂದೇಶವನ್ನು ಕಳುಹಿಸುತ್ತಾ, ಇಂದಿನ ಕಾಲಘಟ್ಟದಲ್ಲಿ ಹಿರಿಯರ ಪರಿಸ್ಥಿತಿಯ ಕುರಿತು ಪೋಪ್ ಫ್ರಾನ್ಸಿಸ್ ಅವರು ಅವಲೋಕಿಸಿದ್ದಾರೆ. "ದಯಾಮಯ ದೇವರು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ" ಎಂದು ಹೇಳಿದ್ದಾರೆ.

ವರದಿ: ಸಿಸ್ಟರ್ ಫ್ರಾನ್ಸೀನ್-ಮರೀ ಕೂಪರ್, ಐಎಸ್ಎಸ್ಎಂ

"ನನ್ನ ವೃದ್ಧಾಪ್ಯದಲ್ಲಿ ನನ್ನನ್ನು ತಳ್ಳಬೇಡ" ಎಂಬ ಕೀರ್ತನೆ ಗ್ರಂಥದ ಸಾಲುಗಳನ್ನು ಪೋಪ್ ಫ್ರಾನ್ಸಿಸ್ ಅವರು ಈ ವರ್ಷದ ಅಜ್ಜ-ಅಜ್ಜಿಯರ ಹಾಗೂ ಹಿರಿಯರ ವಿಶ್ವದಿನಕ್ಕೆ ಶೀರ್ಷಿಕೆಯನ್ನಾಗಿ ತೆಗೆದುಕೊಂಡಿದ್ದಾರೆ.

ನಾಲ್ಕನೇ ವಿಶ್ವ ಹಿರಿಯರ ಹಾಗೂ ಅಜ್ಜ-ಅಜ್ಜಿಯರ ದಿನಾಚರಣೆಗೆ ಸಂದೇಶವನ್ನು ನೀಡಿರುವ ಪೋಪ್ ಫ್ರಾನ್ಸಿಸ್ ಅವರು "ದೇವರು ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ" ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.

' ಹಿರಿಯರು ಒಂದು ಆಧ್ಯಾತ್ಮಿಕ ಸೌಧವನ್ನು ಕಟ್ಟುವಾಗ ಭವಿಷ್ಯದ ಯುವ ಕಲ್ಲುಗಳು ಗಟ್ಟಿಯಾಗಿ ನಿಲ್ಲುವ ಅಡಿಪಾಯವಾಗಿದ್ದಾರೆ" ಎಂದು ಹೇಳುವ ಮೂಲಕ ಹಿರಿಯರು ಹಾಗೂ ವೃದ್ಧರ ಪ್ರಾಮುಖ್ಯತೆಯನ್ನು ಪೋಪ್ ಫ್ರಾನ್ಸಿಸ್ ಅವರು ಒತ್ತಿ ಹೇಳಿದ್ದಾರೆ.

ಬೈಬಲ್ ಶ್ರೀಗ್ರಂಥದಲ್ಲಿ ನಮ್ಮ ಬದುಕಿನ ಪ್ರತಿ ಹಂತ ಹಾಗೂ ಪ್ರತಿ ಗಳಿಗೆಯಲ್ಲೂ ದೇವರ ಸಾಮೀಪ್ಯ ಹಾಗೂ ವಿಶೇಷವಾಗಿ ವೃದ್ಧಾಪ್ಯದಲ್ಲಿ ನಮ್ಮನ್ನು ಕಾಡುವ ಒಂಟಿತನ ಎರಡನ್ನೂ ಸಹ ಕಾಣಬಹುದಾಗಿದೆ ಎಂದು ಪೋಪ್ ಫ್ರಾನ್ಸಿಸ್ ಬರೆಯುತ್ತಾರೆ. ಇದು ಕಟು ವಾಸ್ತವವನ್ನು ತೋರಿಸುತ್ತದೆ ಎಂದೂ ಸಹ ಹೇಳಿದ್ದಾರೆ.

"ಒಂಟಿತನಕ್ಕೆ ನಾನಾ ಕಾರಣಗಳಿವೆ. ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳು ಬೇರೆ ದೇಶಗಳಿಗೆ ಹೋಗುವ ಕಾರಣ ತಂದೆ-ತಾಯಿಗಳು ಒಂಟಿಯಾಗಿ, ಒಂಟಿತನದ ನೋವನ್ನು ಅನುಭವಿಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಹೇಳುತ್ತಾರೆ.

ಹಲವು ಸಂಪ್ರದಾಯಗಳು ಹಾಗೂ ನಂಬಿಕೆಗಳ ಪ್ರಕಾರ ಹಿರಿಯರು ಹಾಗೂ ವಯೋವೃದ್ಧರು ಯುವಕ ಯುವತಿಯರ ಜೀವವನ್ನು ಸೆಳೆದುಕೊಂಡು, ಅವರ ಬದುಕನ್ನು ಹೀರಿ ಬಿಡುತ್ತಾರೆ ಎಂಬ ದೂರುಗಳನ್ನು ಇವರ ಮೇಲೆ ಹೊರಿಸಲಾಗುತ್ತದೆ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್, ಈ ಆರೋಪಗಳು ಹಿರಿಯರ ಜಗತ್ತನ್ನು ಹೇಗೆ ಸಂಚುಗಳು ಸುತ್ತುವರೆದಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಅಂತಿಮವಾಗಿ, ಬೈಬಲ್ ಶ್ರೀಗ್ರಂಥದ ಮಾದರಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವ ಪೋಪ್ ಫ್ರಾನ್ಸಿಸ್, ನಾವು ರೂತಳಂತೆ ಜೀವನವನ್ನು ರೂಪಿಸಿಕೊಂಡು, ತಾಳ್ಮೆಯಿಂದ ಎಲ್ಲರನ್ನೂ ಒಳಗೊಳ್ಳುವ ಮೂಲಕ ನಡೆಯಬೇಕಿದೆ ಎಂದು ಹೇಳಿದರು.  

14 May 2024, 18:41