ಹುಡುಕಿ

ಅಮೇಜಾನ್ ಕಾಡು ಅಮೇಜಾನ್ ಕಾಡು 

ಬುಡಕಟ್ಟು ಸಮುದಾಯದ ನಾಯಕ: ಪೋಪ್ ಫ್ರಾನ್ಸಿಸ್ ನಮ್ಮ ಭೂಮಿಯನ್ನು ರಕ್ಷಿಸಲು ಸಹಾಯ ಮಾಡುತ್ತಾರೆ

ಅಮೇಜಾನ್ ಕಾಡಿನ ಯನೋಮಾಮಿ ಬುಡಕಟ್ಟಿನ ನಾಯಕನಾದ ಶಮಾನ್ ಡಾವಿ ಕೊಪೆನಾವ ಪೋಪ್ ಫ್ರಾನ್ಸಿಸ್ ಅವರನ್ನು ಬುಧವಾರದ ಸಾರ್ವಜನಿಕ ದರ್ಶನಕ್ಕೂ ಮುಂಚೆ ಭೇಟಿ ಮಾಡಿ, ಯಾವುದೇ ನಿಯಮಗಳಿಲ್ಲದೆ ಅಮೇಜಾನ್ ಕಾಡಿನ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಎಗ್ಗಿಲ್ಲದೆ ದೋಚುತ್ತಿರುವ ಕುರಿತು ಚರ್ಚಿಸಿದರು. ಇದರ ನಂತರ ತಮ್ಮ ಅನುಭವವನ್ನು ವ್ಯಾಟಿಕನ್ ನ್ಯೂಸ್'ನೊಂದಿಗೆ ಹಂಚಿಕೊಂಡಿದ್ದಾರೆ.

ವರದಿ: ಅಂಟೋನೆಲ್ಲ ಪಲೇರ್ಮೋ, ಅಜಯ್ ಕುಮಾರ್

"ಬಿಳಿ ಮನುಷ್ಯನ ಬಗ್ಗೆ ನನಗೆ ಭಯವಿಲ್ಲ, ಆದರೆ ಭೂಮಿಯನ್ನು ನಾಶಗೊಳಿಸುವ, ಮರಗಳನ್ನು ಕಡಿದು, ಲವಣಗಳಿಗಾಗಿ ಭೂಮಿಯಲ್ಲಿ ರಂಧ್ರಗಳನ್ನು ಮಾಡುವ ಯಂತ್ರಗಳನ್ನು ಕಂಡರೆ ನನಗೆ ಅತೀವ ಭಯ. ಭೂಮಿಯನ್ನು ಅಗೆದು ಬೇಕಾದ ಲವಣಗಳನ್ನು ಹೊರ ತೆಗೆಯುವ ಕ್ರಿಯೆ ನಮ್ಮ ಸಮುದಾಯಗಳನ್ನು, ನದಿಗಳನ್ನು, ನಮ್ಮ ಆರೋಗ್ಯ ಸೇರಿದಂತೆ ನಮ್ಮ ಇಡೀ ಬದುಕನ್ನೇ ಸರ್ವನಾಶ ಮಾಡಬಹುದು ಎಂದು ಭಯವಾಗುತ್ತಿದೆ. ನಮ್ಮ ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಕಾಡು ಬೇಕಾಗಿದೆ."

ತಮ್ಮ ಈ ನೇರ ಮಾತುಗಳ ಮೂಲಕ, ಶ್ರೀ ಡಾವಿ ಕೊಪೆನಾವ ಶಮಾನ್, ಯನೋಮಾಮಿ ಬುಡಕಟ್ಟು ಸಮುದಾಯದ ಪ್ರತಿನಿಧಿ, ಪೋಪರ ಸಾರ್ವಜನಿಕ ದರ್ಶನದ ನಂತರ ವ್ಯಾಟಿಕನ್ ನ್ಯೂಸ್'ನೊಂದಿಗೆ ಮಾತನಾಡುತ್ತಾರೆ.

ಪೋಪ್ ಫ‌್ರಾನ್ಸಿಸ್ ಅವರೊಂದಿಗಿನ ಈ ಭೇಟಿಯು ಏಪ್ರಿಲ್ 10 ರಂದು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ನಡೆಯಿತು.

ಅಮೇಜಾನ್ ಕಾಡಿನ ರಕ್ಷಣೆಗೆ ಪೋಪ್ ಸಹಾಯ ಮಾಡುತ್ತಾರೆ ಎಂಬ ನುಡಿ

"ಹೌದು. ನನಗೆ ಹಾಗೂ ನನ್ನ ಜನತೆಯ ಭವಿಷ್ಯಕ್ಕಾಗಿ ಪೋಪ್ ಫ್ರಾನ್ಸಿಸರ ಜೊತೆ ಮಾತನಾಡುವುದು ಎಷ್ಟು ಪ್ರಮುಖವಾಗಿತ್ತು ಎಂದು ನನಗೆ ತಿಳಿದಿತ್ತು." ಎಂದು ಶ್ರೀ ಶಮಾನ್ ಕೊಪೆನಾವ ಹೇಳುತ್ತಾರೆ.

"ನನ್ನನ್ನು ಆದರದಿಂದ ಸ್ವಾಗತಿಸಲಾಯಿತು." ಎಂದು ಹೇಳಿದ ಕೊಪೆನಾವ ಅವರು ಅಮೇಜಾನ್ ಕಾಡಿನ ಪ್ರಸ್ತುತ ಸ್ಥಿತಿಗತಿಗಳು, ಅನೇಕ ಶತಮಾನಗಳಿಂದ ಅವರ ಸಮುದಾಯ ಅಲ್ಲಿ ಜೀವಿಸುತ್ತಿರುವುದು ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ ವಾಣಿಜ್ಯೀಕರಣದಿಂದ ಕಾಡಿಗಾಗುತ್ತಿರುವ ಸಮಸ್ಯೆಗಳ ಕುರಿತು ಪೋಪ್ ಅವರೊಂದಿಗೆ ಹಂಚಿಕೊಂಡಿದ್ದೇನೆ ಎಂದು ಹೇಳಿದರು.

"ಈ ಪ್ರದೇಶವನ್ನು ಅಂತರಾಷ್ಟ್ರೀಯ ರಕ್ಷಿತ ಪ್ರದೇಶವೆಂದು ಘೋಷಿಸಿದ್ದರೂ ಸಹ, ಪದೇ ಪದೇ ಕಾಡಿನ ಮೇಲೆ ಆಕ್ರಮಣ ನಡೆಯುತ್ತಲೇ ಇದೆ. ಇದಕ್ಕೆ ಕಾರಣ ಅಧಿಕಾರಿಗಳು ಇದಕ್ಕೆ ಆಸ್ಪದ ಕೊಡುತ್ತಾರೆ." ಎಂದು ಕೊಪೆನಾವ ಹೇಳುತ್ತಾರೆ.

"ಚಿನ್ನದ ವ್ಯಾಪಾರಕ್ಕಾಗಿ ಪ್ರಸ್ತಾವನೆಯನ್ನಿಟ್ಟಿರುವ ವಾಣಿಜ್ಯೋದ್ಯಮಿಗಳು ಹಾಗೂ ಇತರರನ್ನು ಕಾಡಿನೊಳಕ್ಕೆ ಬಿಡದಂತೆ ಬ್ರೆಜಿಲ್ ದೇಶದ ಅಧ್ಯಕ್ಷರಿಗೆ ಮನವಿ ಮಾಡಬೇಕೆಂದು ನಾನು ಪೋಪ್ ಫ್ರಾನ್ಸಿಸ್ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ." ಎಂದು ಕೊಪೆನಾವ ಪೋಪ್ ಭೇಟಿಯ ಮಾಹಿತಿಯನ್ನು ಹಂಚಿಕೊಂಡರು.

ಗೌರವ ಮತ್ತು ಪ್ರೀತಿಯ ಕೊರತೆ

"ಈ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಬುಡಕಟ್ಟು ಸಮುದಾಯವನ್ನು ಗೌರವಿಸಿ, ಪ್ರೀತಿಸುವ ಹಾಗೂ ಅವರ ಇತಿಹಾಸದ ಕುರಿತು ತಿಳಿದುಕೊಂಡಿರುವವರನ್ನು ಆಯ್ಕೆ ಮಾಡಿಕೊಳ್ಳುವುದು ಪ್ರಮುಖವಾಗಿದೆ." ಎಂದು ಕೊಪೆನಾವ ಹೇಳುತ್ತಾರೆ.

"ಸ್ಥಳೀಯ ಹಾಗೂ ರಾಷ್ಟ್ರೀಯ ರಾಜಕೀಯ ನಾಯಕರಿಗೆ ಯನೋನಾಮಿ ಬುಡಕಟ್ಟಿನ ಸುರಕ್ಷತೆ ಮುಖ್ಯವಲ್ಲ. ಭೂಮಾಲಿಕರು, ಮರದ ವ್ಯಾಪಾರಿಗಳು ನಮ್ಮ ಭೂಮಿಗೆ ಗೌರವವನ್ನು ನೀಡುವುದಿಲ್ಲ." ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಕಾಡನ್ನು ಗುಣಪಡಿಸಲಾಗುವುದಿಲ್ಲಲಆದರೆ ಅದನ್ನು ಜೀವಂತವಾಗಿರಿಸುವುದು ಸಮಯದ ತುರ್ತಾಗಿದೆ

ಎಂಬತ್ತರ ದಶಕಗಳಿಂದ ಶ್ರೀ ಕೊಪೆನಾವ ಅವರು ವಿದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ರಕ್ಷಣೆ ಹಾಗೂ ಅಮೇಜಾನ್ ಮಳೆ ಕಾಡಿನ ಸುರಕ್ಷತೆಯ ಕುರಿತು ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

"ಕಾಡನ್ನು ಗುಣಪಡಿಸಬಹುದೇ?" ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿದ ಅವರು "ಇಲ್ಲ. ಈಗಾಗಲೇ ಕಾಡನ್ನು ನಾಶಮಾಡಲಾಗಿದೆ. ದೇವರು ಮಾತ್ರ ಅದನ್ನು ಗುಣಪಡಿಸಬಲ್ಲರು. ಮನುಷ್ಯರಿಂದ ಅದು ಸಾಧ್ಯವಿಲ್ಲ." ಎಂದು ಹೇಳಿದರು.    

11 April 2024, 16:59