ರೆಜೀನಾ ಚೇಲಿಯಲ್ಲಿ ಪೋಪ್: "ಯುದ್ಧದಿಂದ ಬಳಲುತ್ತಿರುವ ಕುಟುಂಬಗಳನ್ನು ನೆನಪಿಸಿಕೊಳ್ಳುತ್ತೇನೆ"
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ನಗರದಲ್ಲಿ ಕುಟುಂಬಗಳ ಜ್ಯೂಬಿಲಿಗಾಗಿ ನೆರೆದಿದ್ದ ಭಕ್ತಾಧಿಗಳನ್ನು ರೆಜೀನಾ ಚೇಲಿ ಪ್ರಾರ್ಥನೆಯ ವೇಳೆ ಪೋಪ್ ಹದಿನಾಲ್ಕನೇ ಲಿಯೋ ಅವರು ಉದ್ದೇಶಿಸಿ ಮಾತನಾಡಿದ್ದಾರೆ. ಇದೇ ವೇಳೆ ಅವರು ಪ್ರಭುವಿನ ಸ್ವರ್ಗಾರೋಹಣದ ಹಬ್ಬದ ಕುರಿತು ಚರ್ಚಿಸಿದ್ದಾರೆ.
ಇದೇ ವೇಳೆ ಅವರು ಪ್ರಪಂಚದಾದ್ಯಂತ ಯುದ್ಧದಿಂದ ನರಳುತ್ತಿರುವ ಎಲ್ಲಾ ಕುಟುಂಬಗಳನ್ನು ನೆನಪಿಸಿಕೊಂಡಿದ್ದು, ಅವರಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕೆಂದು ಕರೆ ನೀಡಿದ್ದಾರೆ. "ಮಾತೆ ಮರಿಯಮ್ಮನವರು ನಮ್ಮೆಲ್ಲರಿಗೂ ಮುಂದೆ ಸಾಗುವ ಶಕ್ತಿಯನ್ನು ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಕುಟುಂಬಗಳೊಂದಿಗೆ ಬಂದಿದ್ದ ಮಕ್ಕಳನ್ನು ನೋಡುತ್ತಾ ಸಂತೋಷದಿಂದ ಮಾತನಾಡಿದ ಪೋಪರು ಮಕ್ಕಳು ಆನಂದವನ್ನು ಹಾಗೂ ಸಕಾರಾತ್ಮಕತೆಯನ್ನು ತರುತ್ತಾರೆ ಎಂದು ಹೇಳಿದರು. "ಕುಟುಂಬಗಳು ಪುಟ್ಟ ಧರ್ಮಸಭೆಗಳಾಗಿದ್ದು, ಧರ್ಮಸಭೆಯ ಆಧಾರ ಇವೇ" ಎಂದು ಹೇಳಿದ್ದಾರೆ. "ವಿಶ್ವಾಸ, ಭರವಸೆ ಮತ್ತು ಪ್ರೀತಿ ಸದಾ ನಿಮ್ಮಲ್ಲಿ ನೆಲೆಗೊಳ್ಳಲಿ" ಎಂದು ಹೇಳಿದ ಪೋಪ್ ಹದಿನಾಲ್ಕನೇ ಲಿಯೋ ಅವರು ವಿಶೇಷವಾಗಿ ಹಿರಿಯರಿಗೆ ಹಾಗೂ ಅಜ್ಜ-ಅಜ್ಜಿಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಇದೇ ವೇಳೆ ಪೊಲೆಂಡ್ ದೇಶದ ಕನ್ಯಾಸ್ತ್ರೀಯೊಬ್ಬರನ್ನು ಪುನೀತರ ಪದವಿಗೇರಿಸುವ ಕುರಿತು ಸಹ ಪೋಪ್ ಹದಿನಾಲ್ಕನೇ ಲಿಯೋ ಅವರು ಮಾತನಾಡಿದರು. ಇಂದು 59ನೇ ವಿಶ್ವ ಸಾಮಾಜಿಕ ಸಂವಹನ ದಿನವಾದ ಕಾರಣ, ಅದನ್ನು ಆರಂಭಿಸಿದ ಪೋಪ್ ಸಂತ ಆರನೇ ಪೌಲರನ್ನು ನೆನಪಿಸಿಕೊಂಡರು.