ರೆಜೀನಾ ಚೇಲಿ ಪ್ರಾರ್ಥನೆಯಲ್ಲಿ ಪೋಪ್: ಯುದ್ಧದಿಂದ ಬಳಲುತ್ತಿರುವವರನ್ನು ಮರೆಯಬಾರದು
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದಿನ ರೆಜೀನಾ ಚೇಲಿ ಪ್ರಾರ್ಥನೆಯ ನಂತರ ಯುದ್ಧದ ಕಾರಣದಿಂದ ಬಳಲುತ್ತಿರುವ, ಯಾತನೆಯನ್ನು ಅನುಭವಿಸುತ್ತಿರುವ ಜನತೆಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ. ವಿಶೇಷವಾಗಿ ಗಾಝಾ, ಮ್ಯಾನ್ಮಾರ್ ಹಾಗೂ ಉಕ್ರೇನ್ ದೇಶದ ಜನತೆಯನ್ನು ನೆನಪಿಸಿಕೊಂಡಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದು ತಮ್ಮ ಪ್ರೇಷಿತಾಧಿಕಾರದ ಉದ್ಘಾಟನಾ ಬಲಿಪೂಜೆಯನ್ನು ನೆರವೇರಿಸಿದರು. ನಂತರ, ರೆಜೀನಾ ಶೇಲಿ ಪ್ರಾರ್ಥನೆಯನ್ನು ಪಠಿಸಿ, ಯುದ್ಧದಿಂದ ನರಳುತ್ತಿರುವ ಜನತೆಯನ್ನು ನೆನಪಿಸಿಕೊಂಡು ಅವರಿಗಾಗಿ ಪ್ರಾರ್ಥಿಸಿದರು.
ಇದೇ ವೇಳೆ ಈ ಬಲಿಪೂಜೆಗೆ ಸಾಕ್ಷಿಯಾದ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನತೆ, ವಿವಿಧ ದೇಶಗಳ ಮುಖ್ಯಸ್ಥರು, ವಿವಿಧ ಧರ್ಮಗಳ ಪ್ರತಿನಿಧಿಗಳು ಸೇರಿದಂತೆ ಕ್ರೈಸ್ತ ಪಂಗಡಗಳ ಪ್ರತಿನಿಧಿಗಳಿಗೆ ಧನ್ಯವಾದವನ್ನು ತಿಳಿಸಿದರು. ನೇರ ಹಾಗೂ ಪರೋಕ್ಷವಾಗಿ ಈ ಬಲಿಪೂಜೆ ನೆರವೇರಲಿ ನೆರವಾದ ಎಲ್ಲರನ್ನೂ ಪೋಪ್ ಲಿಯೋ ಅವರು ಕೃತಜ್ಞತೆಯಿಂದ ನೆನೆದರು.
"ವಿಶ್ವಾಸ ಹಾಗೂ ಸಹಭಾಗಿತ್ವದ ಸಂತೋಷದಲ್ಲಿ, ಯುದ್ಧದಿಂದ ನರಳುತ್ತಿರುವ ನಮ್ಮ ಸಹೋದರ-ಸಹೋದರಿಯರನ್ನು ನಾವು ಮರೆಯಬಾರದು" ಎಂದು ಪೋಪ್ ಹದಿನಾಲ್ಕನೇ ಸಿಂಹನಾಥರು (ಲಿಯೋ) ಹೇಳಿದರು.
ಇದೇ ವೇಳೆ ಅವರು ಗಾಝಾ, ಮ್ಯಾನ್ಮಾರ್ ಹಾಗೂ ಉಕ್ರೇನ್ ದೇಶದಲ್ಲಿ ಯುದ್ಧದ ಕಾರಣದಿಂದ ನರಳುತ್ತಿರುವ ಜನತೆಯನ್ನು, ವಿಶೇಷವಾಗಿ ಮಕ್ಕಳು ಹಾಗೂ ಹಿರಿಯರನ್ನು ನೆನಪಿಸಿಕೊಂಡರು. ಈ ಯುದ್ಧಗಳು ಹಾಗೂ ಹಿಂಸಾಚಾರಗಳು ನಿಂತು, ಶಾಂತಿ ಮೂಡುವ ಮೂಲಕ ಜೀವಗಳು ಉಳಿಯಲಿ" ಎಂದು ನುಡಿದರು.
ಬಲಿಪೂಜೆಯ ನಂತರ ಪೋಪ್ ಲಿಯೋ ಅವರು ಉಕ್ರೇನ್ ದೇಶದ ಪ್ರಧಾನಿ ವ್ಲಾಡಿಮಿರ್ ಝೆಲೆನ್ಸ್ಕಿ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದರು. ಉಕ್ರೇನ್ ಅಧ್ಯಕ್ಷರು ಪೋಪರ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಬಲಿಪೂಜೆಯ ಆರಂಭದಲ್ಲಿ ಮಾತನಾಡಿದ ಅವರು "ಸ್ವರ್ಗದಿಂದ ಪೋಪ್ ಫ್ರಾನ್ಸಿಸ್ ಅವರು ನಮ್ಮನ್ನು ನೋಡುತ್ತಿದ್ದಾರೆ. ಅವರ ಉಪಸ್ಥಿತಿಯ ಭಾವವನ್ನು ನಾನು ಅನುಭವಿಸುತ್ತಿದ್ದೇನೆ" ಎಂದು ಹೇಳಿದರು.
ಇಂದು ತಮ್ಮ ಪ್ರೇಷಿತಾಧಿಕಾರವನ್ನು ಅಧಿಕೃತವಾಗಿ ಆರಂಭಿಸಿದ ಹಿನ್ನೆಲೆ ಪೋಪ್ ಹದಿನಾಲ್ಕನೇ ಲಿಯೋ ಅವರು ತಮಗಾಗಿ ಮಾತೆ ಮರಿಯಮ್ಮನವರಲ್ಲಿ - ಅಂದರೆ ಸಮುದ್ರದ ತಾರೆ ಹಾಗೂ ಒಳ್ಳೆಯ ಆಲೋಚನೆಯ ಮಾತೆ - ಎಂಬ ಹೆಸರುಗಳಿಂದ ಕರೆಯಲ್ಪಡುವ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯಲ್ಲಿ ಪ್ರಾರ್ಥಿಸಬೇಕೆಂದು ಎಲ್ಲಾ ಕಥೋಲಿಕರಿಗೆ ಮನವಿ ಮಾಡಿದ್ದಾರೆ.
"ಶಾಂತಿಯ ಉಡುಗೊರೆಗಾಗಿ, ಯಾತನೆ ಪಡುತ್ತಿರುವವರಿಗೆ ಉಪಶಮನವನ್ನು ನೀಡುವುದಕ್ಕಾಗಿ, ಹಾಗೂ ಪುನರುತ್ಥಾನ ಕ್ರಿಸ್ತರನ್ನು ನಾವೆಲ್ಲರೂ ನೋಡುವ ವರದಾನಕ್ಕಾಗಿ ನಾವು ಮಾತೆಯ ಮಧ್ಯಸ್ಥಿಕೆಯನ್ನು ಬೇಡೋಣ" ಎಂದು ವಿಶ್ವಗುರು ಸಿಂಹನಾಥರು (ಲಿಯೋ) ನುಡಿದರು.