ಪೋಪ್ ಫ್ರಾನ್ಸಿಸ್: ಜ್ಞಾನವು ಎಲ್ಲವನ್ನೂ ಒಳಗೊಳ್ಳಬೇಕು
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ವ್ಯಾಟಿಕನ್ನಿನ ಪುರಾತನ ಬರವಣಿಗೆ ಅಧ್ಯಯನ ಶಾಲೆ, ರಾಜತಾಂತ್ರಿಕ ಸಂಬಂಧಗಳು ಹಾಗೂ ಪತ್ರಾಗಾರ ಶಾಲೆ ಹಾಗೂ ಗ್ರಂಥಾಲಯ ವಿಜ್ಞಾನ ಶಾಲೆಗಳು ತಮ್ಮ ಸ್ಥಾಪನೆಯ 140 ಹಾಗೂ 90 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಸಂಸ್ಥೆಗಳ ಸುಮಾರು 200 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸೋಮವಾರ ಪೋಪ್ ಫ್ರಾನ್ಸಿಸ್ ಭೇಟಿ ಮಾಡಿದರು.
ಇವರನ್ನು ಕ್ಲಮೆಂಟೈನ್ ಸಭಾಂಗಣದಲ್ಲಿ ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್, "ತೀವ್ರ ಸಂಶೋಧನೆಯ ಮೂಲಕ ಸತ್ಯವನ್ನೇ ಹೇಳಲು ಶ್ರಮಿಸುತ್ತಿರುವ" ಈ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬದ್ಧತೆ ಹಾಗೂ ಪರಿಶ್ರಮವನ್ನು ಶ್ಲಾಘಿಸಿದರು. "ಯಾವುದೇ ಸಂಶೋಧನೆ ಹಾಗೂ ಪರಿಶೀಲನೆಯಿಲ್ಲದೆ ಎಗ್ಗಿಲ್ಲದೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನಿಮ್ಮ ಸತ್ಯ ಹೇಳುವ ಪ್ರಯತ್ನ ಎಂಬುದು ಅತ್ಯಂತ ಎತ್ತರದ ಸೇವೆಯಾಗಿದೆ" ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿನ ವಿಷಕಾರಿ ಮಾಹಿತಿಯಿಂದ ರಕ್ಷಣೆ ಪಡೆಯುವುದು
ಈ ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಬದ್ಧತೆಯನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್, ಅದೇ ವೇಳೆ ನಾವು ನಮ್ಮ ವಿರುದ್ಧ ಬರುವ ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಲು ಸಿದ್ಧವಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಮಾಹಿತಿಯು ಬಹುತೇಕ ಬಾರಿ ಪರಿಶೀಲಿಸದ ಮಾಹಿತಿಯಾಗಿದ್ದು, ಇದು ವಿಷಕಾರಕವು ಹಾಗೂ ಹಿಂಸಾಕಾರಕವೂ ಸಹ ಆಗಿದೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, ಜ್ಞಾನ ಎಂಬುದು ಎಲ್ಲರನ್ನೂ ಒಳಗೊಳ್ಳಬೇಕು. ತಾಂತ್ರಿಕತೆಯ ವಿವಿಧ ರೂಪಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಡಗಿ ಹೊಂಚುಹಾಕುತ್ತಿರುವ ಹಿಂಸಾಕಾರಕ ಹಾಗೂ ವಿಷಕಾರಕ ಮಾಹಿತಿಯ ಕುರಿತು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.
ಸಂಶೋಧನೆಯ ಮೂಲಕ ಸತ್ಯವನ್ನು ತಿಳಿಯುವ ನಿಟ್ಟಿನಲ್ಲಿ ಹಾಗೂ ಆ ಪ್ರಕ್ರಿಯೆಯಲ್ಲಿ ನೀವೆಲ್ಲರೂ ಮುಕ್ತವಾಗಿ ಹಾಗೂ ಸ್ವತಂತ್ರವಾಗಿರಬೇಕು. ಈ ಹಿನ್ನೆಲೆಯಲ್ಲಿ ಯಾವುದೇ "ಸಿದ್ಧಾಂತ"ಗಳಿಗೆ ಜೋತು ಬೀಳದೆ ಮುಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ವ್ಯಾಟಿಕನ್ನಿನ ಈ ಪಾರಂಪರಿಕ ಸಂಸ್ಥೆಗಳು ತಮ್ಮ ಸ್ಥಾಪನೆಯ ದಿನದಿಂದ ಇಲ್ಲಿಯವರೆಗೂ ಸಹ ಸತ್ಯದ ಶೋಧನೆಯಲ್ಲಿ ತೊಡಗಿದ್ದು, ಅತ್ಯಂತ ಉನ್ನತ ಸ್ಥಿತಿಯಲ್ಲಿ ಅತ್ಯುತ್ತಮ ರೀತಿಯಲ್ಲಿ ವಿದ್ಯಾಬ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ, ಅವರನ್ನು ಸತ್ಯದ ರೂವಾರಿಗಳಾಗಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಕಿವಿಮಾತನ್ನು ಹೇಳಿದ್ದಾರೆ.