ಹುಡುಕಿ

2024.02.21 La Fraterna Domus di Sacrofano 2024.02.21 La Fraterna Domus di Sacrofano 

ಸಿನೊಡಾಲಿಟಿ ಅನುಭವವನ್ನು ಹಂಚಿಕೊಳ್ಳಲು ಧರ್ಮಕೇಂದ್ರದ ಗುರುಗಳ ಸಭೆ

ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಿದ ಧರ್ಮಕೇಂದ್ರದ ಗುರುಗಳು ಸಾಕ್ರಫಾನೋ ಎಂಬ ರೋಮ್ ನಗರದ ಆಚೆ ಇರುವ ಪ್ರದೇಶದಲ್ಲಿ ತಮ್ಮ ಅಂತರರಾಷ್ಟ್ರೀಯ ಸಭೆಯನ್ನು ಹಮ್ಮಿಕೊಂಡಿದ್ದು, ಹೇಗೆ ಸ್ಥಳೀಯವಾಗಿ ಧರ್ಮಸಭೆಯಲ್ಲಿ ಅಥವಾ ಸುವಾರ್ತಾ ಪ್ರಸಾರ ಕ್ರಿಯೆಯಲ್ಲಿ ಆಲಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ರೋಮ್ ನಗರದ ಆಚೆ ಇರುವ ಸಾಕ್ರೊಫಾನೋ ಎಂಬ ಪ್ರದೇಶದಲ್ಲಿ ಜಗತ್ತಿನಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಧರ್ಮಕೇಂದ್ರದ ಗುರುಗಳು ಒಟ್ಟಾಗಿ ಆಗಮಿಸಿದ್ದು ಪ್ರಾರ್ಥನೆ, ಆಲಿಸುವಿಕೆ ಹಾಗೂ ಚಿಂತನೆಯ ಹಿನ್ನೆಲೆಯಲ್ಲಿ ಹೇಗೆ ಸ್ಥಳೀಯವಾಗಿ ಸಿನೋಡಲ್ ಧರ್ಮಸಭೆ ಅಥವಾ ಸುವಾರ್ತಾ ಪ್ರಸಾರ ಕ್ರಿಯೆಯನ್ನು  ಒಳಗೊಳ್ಳುವುದು ಎಂಬುದನ್ನು ಚರ್ಚಿಸಲು ಸಭೆ ಸೇರಿದ್ದಾರೆ.

ಐದು ದಿನದ ಈ ಸಭೆಯು ವಿವಿಧ ವಿಷಯಗಳ ಕುರಿತು ಚರ್ಚೆಗೆ ನಾಂದಿ ಹಾಡಲಿದೆ. ಕೊನೆಗೆ ಇವರೆಲ್ಲರೂ ಗುರುವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ.

ಈ ಸಭೆಯನ್ನು ವ್ಯಾಟಿಕನ್ನಿನ ಸಿನೋಡ್ ಜನರಲ್ ಸೆಕ್ರೆಟರಿಯೆಟ್ ಹಾಗೂ ಗುರುಗಳ ಆಯೋಗವು, ಸುವಾರ್ತಾ ಪ್ರಸಾರ ಹಾಗೂ ಪೂರ್ವ ಧರ್ಮಸಭೆಗಳ ಆಯೋಗದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದು, ತಮ್ಮ ಸ್ಥಳೀಯ ಧರ್ಮಸಭೆಗಳಲ್ಲಿ ಧರ್ಮಕೇಂದ್ರದ ಗುರುಗಳ ಅನುಭವ ಹೇಗಿದೆ ಎಂಬುದನ್ನು ಆಲಿಸಿ, ಮೌಲ್ಯೀಕರಿಸುವುದು ಹಾಗೂ ವಿಶ್ವ ಹಂತದಲ್ಲಿ ಅವರಿಗೆ ವ್ಯವಸ್ಥೆಯ ವಿವಿಧ ಮಜಲುಗಳ ಅನುಭವವನ್ನು ಪಡೆಯಲು ಸದವಕಾಶವನ್ನು ನೀಡುವುದು ಇದರ ಉದ್ದೇಶವಾಗಿದೆ.

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿನೋಡ್ ಪ್ರಧಾನ ಕಾರ್ಯದರ್ಶಿ, ಕಾರ್ಡಿನಲ್ ಮಾರಿಯೋ ಗ್ರೇಕ್ "ನೀವು ಇಲ್ಲಿಗೆ ಬಂದಿರುವುದು ಯಾವುದೋ ಬೋಧನೆಯನ್ನು ಅಥವಾ ಉಪನ್ಯಾಸವನ್ನು ಕೇಳಲು ಅಲ್ಲ ಬದಲಿಗೆ ನಿಮ್ಮ ಕಥೆಯನ್ನು ಹೇಳಲು ನೀವು ಇಲ್ಲಿಗೆ ಬಂದಿದ್ದೀರಿ; ಏಕೆಂದರೆ ಪ್ರತಿಯೊಬ್ಬರ ಕತೆಯು ಬಹಳ ಮುಖ್ಯವಾಗಿದೆ." ಎಂದು ಹೇಳಿದರು.

ನಾವು ನಿಮ್ಮ ಕಥೆಗಳನ್ನು ಕೇಳಬೇಕಿದೆ. ಯೇಸುಕ್ರಿಸ್ತರು ಹೇಗೆ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ನಾವು ಆಲಿಸಬೇಕಿದೆ ಎಂದು ಹೇಳಿದ ಕಾಡಿನಲ್, ಈ ಸಭೆಯ ಉದ್ದೇಶ ಪ್ರತಿಯೊಬ್ಬರ ಕಥೆಗಳನ್ನು ಹಂಚಿಕೊಳ್ಳುವುದು; ಹೀಗೆ ಹಂಚಿಕೊಳ್ಳುವ ಮೂಲಕ ನಮ್ಮದೇ ಸ್ವಂತ ಕಥೆಗಳಲ್ಲಿ ದೇವರ ಇರುವಿಕೆಯನ್ನು ಕಂಡುಕೊಳ್ಳುವುದು ಹಾಗೂ ನಮ್ಮ ಕಥೆಗಳಲ್ಲಿ ಹಾಗೂ ಇಡೀ ಧರ್ಮಸಭೆಯಲ್ಲಿ ದೇವರ ಅನುಗ್ರಹ ಇಂದಿಗೂ ಸಹ ಜೀವಂತವಾಗಿದೆ ಎಂಬುದನ್ನು ತಿಳಿದುಕೊಳ್ಳುವುದಾಗಿದೆ ಎಂದು ಹೇಳಿದರು.

ತದನಂತರ ಮಾತನಾಡಿದ ಗುರುಗಳ ಆಯೋಗದ ಕಾರ್ಡಿನಲ್ ಲಾಸರಸ್ ಹುಯಿಂಗ್ ಸಿಕ್, ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಭಾಷಣ ಮಾಡುವುದಲ್ಲ ಬದಲಿಗೆ ಮತ್ತೊಬ್ಬರ ಕಥೆಗಳನ್ನು ಪವಿತ್ರಾತ್ಮರ ಪ್ರೇರಣೆಯ ಮೂಲಕ ಆಲಿಸುವುದಾಗಿದೆ ಎಂದರು. ಇಲ್ಲಿ ನೆರೆದಿರುವ ಪ್ರತಿಯೊಬ್ಬರು ಹಂಚಿಕೊಳ್ಳುವ ವಿಷಯಗಳನ್ನು ಮುಕ್ತ ಮನಸ್ಸಿನಿಂದ ಆಲಿಸುವುದನ್ನು ಮುಂದಿನ ದಿನಗಳಲ್ಲಿ ನಾವೆಲ್ಲರೂ ಮಾಡಲಿದ್ದೇವೆ ಎಂದು ಹೇಳಿದರು.

ಈ 5 ದಿನಗಳಲ್ಲಿ ಇದರಲ್ಲಿ ಭಾಗವಹಿಸಿರುವ ಧರ್ಮಕೇಂದ್ರದ ಗುರುಗಳು, ಸಿನೋಡಲ್ ಧರ್ಮಸಭೆಯ ವಿವಿಧ ಆಯಾಮಗಳ ಕುರಿತು ಚರ್ಚಿಸಲಿದ್ದಾರೆ. ವಿಷಯದ ಕುರಿತಂತೆ ತಮ್ಮ ಅನುಭವ ಕಥನಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಲಿದ್ದಾರೆ. ಹೀಗೆ ಹಂಚಿಕೊಳ್ಳುವ ಮೂಲಕ ಸಂವಾದವನ್ನು ಮುಂದುವರಿಸಿ, ಧರ್ಮಸಭೆಯಲ್ಲಿ ಹೇಗೆ ಆಲಿಸುವಿಕೆ ಎಂಬುದು ಅತ್ಯಂತ ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಲಿದ್ದಾರೆ.

ಗುರುವಾರ ಮುಗಿಯಲಿರುವ ಈ ಸಭೆಯ ನಂತರ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಸಂತ ಪೇತ್ರರ ಚೌಕದಲ್ಲಿ ಭೇಟಿ ಮಾಡಿ, ಅವರೊಂದಿಗೆ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

29 April 2024, 13:19