ಹುಡುಕಿ

ಇಂಡಿಯಾ: ಧರ್ಮಸಭೆಯ ಹೃದಯಬಡಿತವನ್ನು ಅನ್ವೇಷಿಸಿದ ಧಾರ್ಮಿಕ ಭಗಿನಿಯರು

ಸುಮಾರು 100 ಕ್ಕೂ ಹೆಚ್ಚು ಧಾರ್ಮಿಕ ಸಭೆಗಳ ಸುಪೀರಿಯರ್'ಗಳು ತಮ್ಮ ಧಾರ್ಮಿಕ ಸಭೆಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಹಾಗೂ ಧರ್ಮಸಭೆಗೆ ಇನ್ನೂ ಉತ್ತಮ ಸೇವೆ ಸಲ್ಲಿಸಲು ಕೇರಳದಲ್ಲಿ ಒಟ್ಟಾಗಿ ಸೇರಿದ್ದಾರೆ.

ವರದಿ: ಡಾನ್ ಜಿನು ಜೇಕಬ್, ಅಜಯ್ ಕುಮಾರ್

ಭಾರತದಲ್ಲಿರುವ ಒಸ್ಸರ್ವತೋರೆ ರೊಮಾನೋ ಪತ್ರಿಕೆಯ ಪ್ರಕಾಶನಕಾರರು ಇತ್ತೀಚೆಗೆ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಪ್ರದೇಶದ ಹತ್ತಿರವಿರುವ ಸೆಂಗುಲಮ್ ಎಂಬಲ್ಲಿನ ಇಕೋ-ಸ್ಪಿರಿಚುವಾಲಿಟಿ ಸೆಂಟರ್'ನಲ್ಲಿ ಕೇರಳದ ಕಥೋಲಿಕ ಧಾರ್ಮಿಕ ಸಭೆಯ ಮೇಜರ್ ಸುಪೀರಿಯರ್'ಗಳಿಗೆ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. 

"ಒಟ್ಟಾಗಿ ಬೆಳಗಿಸಿ, ಸ್ಪೂರ್ತಿ ನೀಡಿ ಮತ್ತು ಸಬಲೀಕರಿಸಿ: ಧರ್ಮಸಭೆಯ ಹೃದಯಬಡಿತವನ್ನು ಅರಿತಿದ್ದೇವೆ" ಎಂಬುದು ಈ ಕಾರ್ಯಕ್ರಮದ ಶೀರ್ಷಿಕೆಯಾಗಿದೆ. ಈ ಕಾರ್ಯಕ್ರಮದಲ್ಲಿ ನಾಲ್ಕು ಸುಪೀರಿಯರ್ ಜನರಲ್'ಗಳು, ಇಪ್ಪತ್ತೈದು ಪ್ರೊವಿನ್ಷಿಯಲ್'ಗಳು ಹಾಗೂ ಎಪ್ಪತ್ತಾರು ಜನರಲ್/ಪ್ರೊವಿನ್ಷಿಯಲ್ ಕೌನ್ಸಿಲರ್'ಗಳು ಸೇರಿದಂತೆ ಸುಮಾರು 105 ಜನ ಧಾರ್ಮಿಕ ಭಗಿನಿಯರು ಭಾಗವಹಿಸಿದ್ದರು. 

ಈ ಕಾರ್ಯಕ್ರಮದ ಉದ್ದೇಶ ದ್ವಿಗುಣವಾಗಿತ್ತು: ಮೊದಲಿಗೆ, ಜಾಗತೀಕವಾಗಿ ಹೆಚ್ಚುತ್ತಿರುವ ಸವಾಲುಗಳಿಗೆ ಧಾರ್ಮಿಕ ಭಗಿನಿಯರನ್ನು ಅಗತ್ಯ ಸಲಕರಣೆಗಳೊಂದಿಗೆ ಸಿದ್ಧಗೊಳಿಸುವುದು ಹಾಗೂ ಎರಡನೇಯದಾಗಿ, ಅವರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅವರನ್ನು ಹುರಿದುಂಬಿಸುವುದು.

ನಾಯಕತ್ವದ ಕುರಿತು ಇಲ್ಲಿ ತೀವ್ರ ರೀತಿಯ ಸಂವಾದವು ನಡೆದು, ಮೂರು ವಿಧದ ನಾಯಕತ್ವವನ್ನು ಎಲ್ಲಾ ಧಾರ್ಮಿಕ ಭಗಿನಿಯರು, ವಿಶೇಷವಾಗಿ ಧಾರ್ಮಿಕ ಸಭೆಗಳ ವಿವಿಧ ನಾಯಕತ್ವದ ಅಧಿಕಾರದಲ್ಲಿರುವವರು ಮೈಗೂಡಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು: ಮೊದಲನೇಯದಾಗಿ ಸಾಂಸ್ಥಿಕ ನಾಯಕತ್ವ, ಎರಡನೇಯದಾಗಿ ವೈಯಕ್ತಿಕ ನಾಯಕತ್ವ ಹಾಗೂ ಮೂರನೇಯದಾಗಿ ತರ್ಕಬದ್ಧ ನಾಯಕತ್ವ. 

ಬೈಬಲ್ ಶ್ರೀಗ್ರಂಥದಲ್ಲಿನ ನಾಯಕತ್ವದ ಉದಾಹರಣೆಗಳನ್ನು ಬಳಸಿಕೊಂಡು, ಪಾಲ್ಗೊಂಡ ಎಲ್ಲಾ ಭಗಿನಿಯರು ತಮ್ಮ ಸಭೆಯ ಸದಸ್ಯರಲ್ಲಿ ಸ್ಪೂರ್ತಿಯನ್ನು ತುಂಬಿ, ಅವರಲ್ಲಿ ಕ್ರಿಸ್ತೀಯ ಸ್ಪೂರ್ತಿಯನ್ನು ತುಂಬಲು ಶ್ರಮಿಸಬೇಕು.

ಸಾಮಾಜಿಕ ಜಾಲತಾಣದ ಬಳಕೆ ಕುರಿತಂತೆ ವ್ಯಾಟಿಕನ್ ಸಂವಹನ ಪೀಠವು ಪ್ರಕಟಿಸಿರುವ ದಾಖಲೆಯನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪರಿಚಯಿಸಲಾಯಿತು. ಇದರ ಜೊತೆಗೆ ಕಾರ್ಯಕ್ರಮದಲ್ಲಿ ಸಿನೊಡಾಲಿಟಿ ಕುರಿತು ಚರ್ಚಿಸಿ, ವಾಸ್ತವವಾಗಿ ಹೇಗೆ ಧಾರ್ಮಿಕ ಬದುಕಿನಲ್ಲಿ, ವಿಶೇಷವಾಗಿ ಧಾರ್ಮಿಕ ಸಭೆಗಳ ನಾಯಕ ಸ್ಥಾನದಲ್ಲಿರುವವರು ಇದನ್ನು ಅನುಸರಿಸಬೇಕು ಎಂಬುದರ ಕುರಿತು ತೀವ್ರ ಜಿಜ್ಞಾಸೆ ನಡೆಯಿತು. 

ಪ್ರತಿಧರ್ಮಕೇಂದ್ರದಲ್ಲಿ ಒಂದು ಗ್ರಂಥಾಲಯ ಹಾಗೂ ಪ್ರತಿ ಕುಟುಂಬಕ್ಕೂ ಒಸ್ಸರ್ವತೋರೆ ರೊಮಾನೋ ಪತ್ರಿಕೆ ಎಂಬ ಆಶಯದ ಕುರಿತೂ ಸಹ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. ಈ ಕಾರ್ಯಕ್ರಮದ ಆತಿಥ್ಯವನ್ನು ಕಾರ್ಮೈಲೈಟ್ ಸಭೆಯ ಗುರುಗಳು ವಹಿಸಿಕೊಂಡಿದ್ದರು.

ಫಾದರ್ ಜೋಸೆಫ್ ಎಡಪ್ಪುಲವನ್, ಒಸಿಡಿ, (ನಿರ್ದೇಶಕರು, ಅವಿಲ ಇಕೋ-ಸ್ಪಿರಿಚುವಾಲಿಟಿ ಸೆಂಟರ್, ಸೆಂಗುಲಮ್), ಫಾದರ್ ಸೆಬಾಸ್ಟಿಯನ್ ಕೂಡಪ್ಪಟ್ಟು, ಒಸಿಡಿ, ಮತ್ತು ಫಾದರ್ ಜೇಮ್ಸ್ ಅಳಕುಳಿಯಿಲ್, ಒಸಿಡಿ ಈ ಕಾರ್ಯಕ್ರಮದ ಸಂಚಾಲಕರಾಗಿದ್ದರು.     

11 April 2024, 10:29